ಜಿಬರೆಲಿನ್‍ಗಳು  -
ಸಸ್ಯಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಮತ್ತು ನಿರ್ದಿಷ್ಟವಾದ ರಾಸಾಯನಿಕ ರಚನೆಯನ್ನು ಉಳ್ಳ ಹಾರ್ಮೋನುಗಳ ಒಂದು ವರ್ಗ. ಜಿಬರೆಲಿನುಗಳ ಇರುವಿಕೆ ಸಸ್ಯವಿಜ್ಞಾನಿಗಳ ಗಮನಕ್ಕೆ ಬಂದುದು 1926ರಲ್ಲಿ. ಜಪಾನಿನ ಇ. ಕುರಸಾವ ಎಂಬ ಸಸ್ಯವಿಜ್ಞಾನಿ ಬತ್ತದ ಬೆಳೆಯ ಬೇರು ಕೊಳೆಯುವಿಕೆ ರೋಗದ ಕಾರಣವನ್ನು ಶೋಧಿಸುತ್ತಿದ್ದಾಗ ಅತಿ ಎತ್ತರ ಬೆಳೆದ ಕೆಲವು ಬತ್ತದ ಸಸಿಗಳನ್ನು ಗಮನಿಸಿದ. ಇವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಉದ್ದವಾಗಿ ಬೆಳೆದ ಸಸಿಯ ಕಾಂಡದ ಸುತ್ತ ಫ್ಯೂಸೇರಿಯಮ್ ಹೆಟಿರೊಸ್ಟೋರಮ್ (ಜಿಬರೆಲ ಫುಜಿಕುರೈ) ಎಂಬ ಶಿಲೀಂಧ್ರ ಇರುವುದು ಕಂಡು ಬಂತು. ಈ ಶಿಲೀಂಧ್ರದಿಂದ ತೆಗೆದ ದ್ರವಕ್ಕೆ ಕೂಡ ಬತ್ತದ ಸಸಿಗಳ ಕಾಂಡವನ್ನು ವಿಪರೀತವಾಗಿ ಬೆಳೆಸುವ ಶಕ್ತಿಯಿದ್ದಿತು. ಆದ್ದರಿಂದ ಜಿಬರೆಲ ಫುಜಿಕುರೈ ಶಿಲೀಂಧ್ರ ಒಂದು ಬಗೆಯ ದ್ರವವನ್ನು ಉತ್ಪತ್ತಿ ಮಾಡುತ್ತದೆ ಮತ್ತು ಈ ದ್ರವಕ್ಕೆ ಕಾಂಡ ಉದ್ದ ಮಾಡುವ ಗುಣಗಳಿವೆ ಎಂದು ಈತ ತೀರ್ಮಾನಿಸಿದ. ಸ್ವಲ್ಪ ಕಾಲದಲ್ಲೇ ಶಿಲೀಂಧ್ರದಲ್ಲಿನ ಬೆಳೆವಣಿಗೆ ಪ್ರೇರಕವನ್ನು ಬೇರ್ಪಡಿಸಿ ಅದಕ್ಕೆ ಜಿಬರೆಲಿನ್ ಎಂದು ಹೆಸರು ಕೊಟ್ಟ. 1938ರಲ್ಲಿಯ ಬೂಟ ಮತ್ತು ಸುಮಿಕಿ ಎಂಬಿಬ್ಬರು ಈ ವಸ್ತುವನ್ನು ಸ್ಫಟಿಕೀಕರಿಸುವುದರಲ್ಲಿ ಯಶಸ್ವಿಯಾದರು. ಇಷ್ಟು ಪ್ರಮುಖವಾದ ಸಂಶೋಧನೆ ಜಪಾನಿನ ಪ್ರಧಾನ ನಿಯತಕಾಲಿಕಗಳಲ್ಲಿ ಪ್ರಕಟವಾದರೂ ಜಗತ್ತಿಗೆ ತಿಳಿದದ್ದು (ಇಂಗ್ಲಿಷ್ ಭಾಷಾಂತರದ ಮುಖಾಂತರ) ಎರಡನೆಯ ಮಹಾಯುದ್ಧದ ಅನಂತರ ಮಾತ್ರ. ಅಮೆರಿಕ ಸಂಯುಕ್ತಸಂಸ್ಥಾನದ ವ್ಯವಸಾಯ ಇಲಾಖೆಯ ಸ್ಟೊಡಾಲ ಎಂಬಾತ ಮತ್ತು ಇಂಗ್ಲೆಂಡಿನ ಇಂಪೀರಿಯಲ್ ಕೆಮಿಕಲ್ ಇಂಡಸ್ಟ್ರೀಸ್‍ನ ವಿಜ್ಞಾನಿಗಳು 1940-50ರಲ್ಲಿ ನಡೆಸಿದ ಸಂಶೋಧನೆಗಳಿಂದ ಜಿಬರೆಲಿನುಗಳ ಅನೇಕ ಗುಣಗಳನ್ನು ವಿಶದಪಡಿಸಿದ್ದಾರೆ. 1957ರಲ್ಲಿ ಫಿನ್ನೆ ಮತ್ತು ಸಹಾಯಕ ಸಂಶೋಧಕರು ಜಿಬರೆಲಿನುಗಳು ಉನ್ನತ ವರ್ಗದ ಸಸ್ಯಗಳಲ್ಲೂ ದೊರೆಯುತ್ತವೆ ಎಂಬುದನ್ನು ಕಂಡುಹಿಡಿದರು. 1951ರಲ್ಲಿ ಕ್ರಾಸ್ ಮತ್ತು ಸಹಾಯಕರು ಜಿಬಲಿರೆನ್ನಿನ ರಾಸಾಯನಿಕ ರಚನೆಯನ್ನು ಆವಿಷ್ಕರಿಸಿದರು.

	ಜಿಬರಿಲಿನ್ನಿನ ಗುಣಗಳು: ಇದನ್ನು ಪ್ರಥಮವಾಗಿ ಶೋಧಿಸಿದ ದಿನಗಳಿಂದಲೇ ಜಿಬರೆಲಿನ್ ಎಂಬುದು ಒಂದೇ ವಸ್ತುವಲ್ಲ, ಹಲವಾರು ರಾಸಾಯನಿಕಗಳ ಗುಂಪು ಎಂದು ಬಗೆಯಲಾಗಿತ್ತು. ಇದರಿಂದ ಜಿಬರೆಲಿನ್ ಎಂದರೇನು ಎಂಬ ಪ್ರಶ್ನೆ ಮೂಡುತ್ತದೆ. 

	ಒಂದು ಜೈವಿಕ ವಸ್ತುವಿನ ಗುಣವಿವರಣೆ ಮಾಡಲು ಎರಡು ವಿಧಾನಗಳುಂಟು: ಆದರ ರಾಸಾಯನಿಕ ರಚನೆ, 2. ಆ ವಸ್ತುವಿನಿಂದ ಸಸ್ಯಗಳ ಮೇಲೆ ಉಂಟಾಗುವ ಶಾರೀರಕ ಬದಲಾವಣೆಗಳು. ಈ ದೃಷ್ಟಿಯಿಂದ ಜಿಬರೆಲಿನ್‍ಗಳನ್ನು ಪರಿಶೀಲಿಸಿದರೆ, ಎಲ್ಲ ಜಿಬರೆಲಿನ್‍ಗಳೂ ಒಂದೇ ರೀತಿಯ ಮೂಲರಾಸಾಯನಿಕ ರಚನೆಯನ್ನು-ಜಿಬೇನ್ ಚೌಕಟ್ಟನ್ನು-ಪಡೆದಿವೆ. ಯಾವುದೇ ಒಂದು ವಸ್ತು ಜಿಬರೆಲಿನ್ ಎನ್ನಲು ಇದೊಂದೇ ಮುಖ್ಯ ಕಾರಣವಲ್ಲ. ಏಕೆಂದರೆ ಕೆಲವು ವಸ್ತುಗಳು ಮೂಲತಃ ಜಿಬೇನ್ ಚೌಕಟ್ಟನ್ನು ಪಡೆದಿದ್ದರೂ ಸಸ್ಯಗಳಲ್ಲಿ ಯಾವ ಬಗೆಯ ಶಾರೀರಕ ಬದಲಾವಣೆಗಳನ್ನೂ ಇವು ಉಂಟುಮಾಡುವುದಿಲ್ಲ. ಆದ್ದರಿಂದ ಒಂದು ವಸ್ತು ಜಿಬರೆಲಿನ್ ಎಂದು ಹೇಳಬೇಕಾದರೆ ಸಸ್ಯಗಳಲ್ಲಿ ಜಿಬರೆಲಿಕ್ ಆಮ್ಲ ಉಂಟುಮಾಡುವ ಸಸ್ಯಶಾರೀರಿಕ ಕ್ರಯಾಬದಲಾವಣೆಗಳನ್ನು ಹೊಂದಿರಬೇಕು. ಅಂದರೆ, ಜೀವಮಾಪನಗಳಲ್ಲಿ (ಬಯೋಆ್ಯಸೇ) ಜಿಬರೆಲಿನ್ ಭಾಗವಹಿಸಬೇಕು.
ನಿಜವಾದ ಜೀವಮಾಪನ ಹೆಚ್ಚಿನ ನಿಕೃಷ್ಟತೆ, ಸುಲಭತೆ ಮತ್ತು ಸ್ವಲ್ಪ ಪ್ರಮಾಣದಲ್ಲಿದ್ದರೂ ಕಾಣಬಹುದಾದ ಶಾರೀರಕ ಕ್ರಿಯೆಗಳನ್ನು ಉಂಟುಮಾಡುವಂತಿರಬೇಕು. ಈ ಎಲ್ಲ ಗುಣವಿಶೇಷಗಳನ್ನು ಹೊಂದಿರುವ ಜೀವಮಾಪನಗಳನ್ನು ಬಹಳ ವಿರಳ. ಜಿಬರೆಲಿನ್ನಿನ ಜೀವಮಾಪನಗಳು ಬಹಳಷ್ಟಿವೆ. ಆದರೆ ಕರಾರುವಾಕ್ಕಾಗಿರುವುವುವೆಂದರೆ, ಮೊದಲನೆಯದು ಕಾಂಡದ ಕುಬ್ಜತೆಯನ್ನು ವಿರುದ್ಧ ಮಾಡಬಲ್ಲ ಕ್ರಿಯೆ ಮತ್ತು (- ಅಮೈಲೇಸ್ ಕಿಣ್ವವನ್ನು ಉತ್ಪತ್ತಿ ಮಾಡಬಲ್ಲ ಕ್ರಿಯೆ. ಕಾಂಡ ಕುಬ್ಜತೆಯ ವಿರುದ್ಧ ಕಾರ್ಯ ಮಾಡಬಲ್ಲ ಜೀವಮಾಪನಕ್ಕೆ ವಿವಿಧ ಸಸ್ಯಗಳನ್ನು ಬಳಸಿದ್ದಾರೆ. ಸಾಮಾನ್ಯವಾಗಿ ಕುಳ್ಳ ಮೆಕ್ಕೆಜೋಳ ಮತ್ತು ಗಿಡ್ಡ ಸಂತತಿಯ ಬಟಾಣಿ ಸಸ್ಯಗಳನ್ನು ಬಳಸುವರು. ಲೆಟಿಸ್ ಸಸಿಗಳ ಮತ್ತು ಕುಂಬಳದ ಹೈಪೊಕಾಟಲ್ ಪರೀಕ್ಷೆ, ಕೆಂಪು ಬೆಳಕಿನ ಪ್ರತಿಬಂಧನ ಪರೀಕ್ಷೆ, ಬಾರ್ಲಿ ಭ್ರೂಣಾಹಾರ ಪರೀಕ್ಷೆ, ರೂಮೆಕ್ಸ್ ಎಲೆಯ ಮುಪ್ಪು ಪ್ರತಿಲೋಭನದ ಪರೀಕ್ಷೆ ಮುಂತಾದುವು ಜಿಬರೆಲಿನ್ ಜೀವಮಾಪನದ ಕೆಲವು ವಿಧಾನಗಳು. 

ಮೇಲೆ ಹೇಳಿದ ಜೀವಮಾಪನೆಗಳ ಉಪಯೋಗದಿಂದ ಸಸ್ಯವಿಜ್ಞಾನಿಗಳು ಸಸ್ಯಗಳಲ್ಲಿ ದೊರೆಯಬಹುದಾದ ವಿವಿಧ ಜಿಬರೆಲಿನ್‍ಗಳನ್ನು ಪರಿಶೋಧಿಸಿದ್ದಾರೆ.  ಇಲ್ಲಿಯ ತನಕ ಕಂಡುಹಿಡಿದಿರುವ ಜಿಬರೆಲಿನ್‍ಗಳ ಸಂಖ್ಯೆ 37. ಈ ಪಟ್ಟಿ ಪ್ರತಿ ವರ್ಷ ಬೆಳೆಯುತ್ತಲೇ ಇದೆ.  ಇವುಗಳಲ್ಲಿ ಕೆಲವು ಜಿಬರೆಲ ಫುಜಿಕುರೈಗೆ ಮಾತ್ರವೇ ಸೀಮಿತವಾಗಿವೆ. ಕೆಲವು ಬಗೆಯವು ಉನ್ನತವರ್ಗದ ಸಸ್ಯಗಳಲ್ಲಿ ಮಾತ್ರ ಕೆಲವು ಶಿಲೀಂಧ್ರ ಹಾಗೂ ಉನ್ನತ ಸಸ್ಯಗಳೆರಡರಲ್ಲೂ ಉಂಟು. ಕೊನೆಯ ಪಕ್ಷ 16 ಬಗೆಯ ಜಿಬರೆಲಿನ್‍ಗಳನ್ನು ಶಿಲೀಂಧ್ರದಿಂದ (ಉಂ1 - gಂ4, gಂ7, - gಂ9, - gಂ16, ಉಂ24, ಉಂ25, ,ಮತ್ತು ಉಂ26), 27 ಬಗೆಗಳನ್ನು ಉನ್ನತವರ್ಗದ ಸಸ್ಯಗಳಿಂದ ( ಉಂ1 — ಉಂ9, ಉಂ13, ಉಂ17- ಉಂ23, ಉಂ26- ಉಂ35 ), ಮತ್ತು ಕೊನೆಯ ಪಕ್ಷ 7 ಜಿಬರೆಲಿನ್‍ಗಳನ್ನು ಸಸ್ಯಗಳಿಂದ ಹಾಗೂ ಶಿಲೀಂಧ್ರಗಳಿಂದ ( ಉಂ1 — ಉಂ4, ಉಂ7, ಉಂ9 ಮತ್ತು ಉಂ13) ಬೇರ್ಪಡಿಸಲಾಗಿದೆ.

	ವಿವಿಧ ಸಸ್ಯಗಳಲ್ಲಿ, ಒಂದೇ ಸಸ್ಯದ ವಿವಿಧ ಭಾಗಗಳಲ್ಲಿ ಮತ್ತು ಒಂದೇ ಸಸ್ಯದ ಒಂದೇ ಭಾಗದ ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಜಿಬರೆಲಿನ್‍ಗಳಿರಬಹುದು. ಸಸ್ಯಗಳಲ್ಲಿ ಇರಬಹುದಾದ ಜಿಬರೆಲಿನ್ ಸಂಖ್ಯೆಯಲ್ಲೂ ವ್ಯತ್ಯಾಸ ಕಾಣಬಹುದು. ಉದಾಹರಣೆಗೆ, 13 ಬಗೆಯ ಜಿಬರೆಲಿನ್‍ಗಳು ( ಉಂ1 - ಉಂ5, ಉಂ7,- ಉಂ9, ಉಂ19  ಉಂ20, ಉಂ27, ಉಂ29) ಫಾರಬೈಟಿಸ್ ನಿಲ್ ಎಂಬ ಸಸ್ಯದಲ್ಲಿದ್ದರೆ ಟ್ಯೂಲಿಪ್ ಗೆಡ್ಡೆಗಳಲ್ಲಿ 5 ಬಗೆಗಳು ( ಉಂ1, ಉಂ5, ಉಂ8, ಉಂ9, ಮತ್ತು ಉಂ13 ) ದ್ರಾಕ್ಷಿಯಲ್ಲಿ 3 ಬಗೆಗಳು ( ಉಂ3,  ಉಂ4, ಮತ್ತು ಉಂ7,)  ಬಿದರಿನ ಕಾಂಡದಲ್ಲಿ 3 ಬಗೆಗಳು  ( ಉಂ18,  ಉಂ19, ಮತ್ತು ಉಂ20,), ಕಬ್ಬಿನಲ್ಲಿ ಒಂದು ಬಗೆ (ಉಂ5) , ಬಾಳೆಯಲ್ಲಿ ಒಂದು (ಉಂ7) ಇವೆ. 

	ರಾಸಾಯನಿಕ ಸ್ವರೂಪ: ಎಲ್ಲ ಜಿಬರೆಲಿನ್‍ಗಳೂ ರಾಸಾಯನಿಕವಾಗಿ ಮೂಲ ಜಿಬೇನ್ ಚೌಕಟ್ಟನ್ನು ಪಡೆದಿವೆ. ಇವುಗಳ ಅಣುಸೂತ್ರ ಕಾರ್ಬನ್ ಪರಮಾಣು ಸಂಖ್ಯೆಗೆ ಅನುಗುಣವಾಗಿದೆ.  ಕೆಲವು ಜಿಬರೆಲಿನ್‍ಗಳಲ್ಲಿ 19 ಕಾರ್ಬನ್ ಪರಮಾಣುಗಳೂ ಮತ್ತೆ ಕೆಲವಲ್ಲಿ 20 ಕಾರ್ಬನ್ ಪರಮಾಣುಗಳೂ ಇವೆ ಎರಡನೆಯ ಗುಂಪಿನಲ್ಲಿ ಒಂದು ಜಿಬರೆಲಿನ್ ಅಣುವಿನಲ್ಲಿ ಎರಡು ಕಾರ್ಬಾಕ್ಸಿಲ್ (-ಅಔಔಊ) ಗುಂಪುಗಳಿವೆ.  ಜಿಬರೆಲಿನ್ ಅಣುಗಳು ಕಾರ್ಬಾಕ್ಸಿಲ್ ವರ್ಗ ವ್ಯತ್ಯಾಸದಿಂದಾಗಲಿ, ಹೈಡ್ರಾಕ್ಸಿಲ್             (-ಔಊ) ವರ್ಗ ವ್ಯತ್ಯಾಸದಿಂದಾಗಲಿ ಜೋಡಿ ಬಂಧನದ ಸ್ಥಳದಿಂದಾಗಲೀ ಒಂದನ್ನೊಂದು ಹೋಲುವುದಿಲ್ಲ.  ಸಾಮಾನ್ಯವಾಗಿ ಕಾಣಬರುವ ಜಿಬರಲ್-3ರ (ಉಂ3-ಜಿಬರಲ್ ಆಮ್ಲ ಎಂಬ ಹೆಸರೂ ಉಂಟು.) ಗುಣವಿಶೇಷಗಳೊಂದಿಗೆ ಮಿಕ್ಕ ಜಿಬರೆಲಿನ್‍ಗಳನ್ನು ಹೋಲಿಸುವರು. ಜೈವಿಕವಾಗಿ ಜಿಬರೆಲಿನ್-ನಿಷ್ಕರ್ಷತೆಯನ್ನುಳ್ಳ, ಆದರೆ ರಾಸಾಯನಿಕವಾಗಿ ಜಿಬೇನ್ ಚೌಕಟ್ಟನ್ನು ಹೊಂದಿರುವ (ಉದಾಹರಣೆಗೆ ಕೌರೆನಾಲ್, ಸ್ಟೀವಿಯಾಲ್) ವಸ್ತುಗಳ ಸಮೂಹವೇ ಸಸ್ಯಗಳಲ್ಲಿ ಉಂಟು. ಇವನ್ನು ಜೆಬರೆಲಿನ್ ತರಹ ವಸ್ತುಗಳೆನ್ನುವರು. 

	ಬೇರ್ಪಡಿಸುವಿಕೆ: ಕ್ರೋಮಟಾಗ್ರಫಿ ತಂತ್ರಗಳನ್ನು ಬಳಸಿ ಜೆಬರೆಲಿನ್ ಬೇರ್ಪಡಿಸುವಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಅನಿಲ-ದ್ರವ ಕ್ರೋಮಟಾಗ್ರಫಿಯನ್ನು ಜಿಬೆರೆಲಿನ್ ಗುಣವಿಶ್ಲೇಷಣೆ ಮತ್ತು ಪರಮಾಣ ವಿಶ್ಲೇಷಣೆಗಳಲ್ಲಿ ವಿಶೇಷವಾಗಿ ಬಳಸುತ್ತಾರೆ. ಈ ತಂತ್ರವನ್ನು ರಾಶಿರೋಹಿತ ಮಾಪಿಯ ಜೊತೆಯಲ್ಲಿ ಬಳಸಿದರೆ ಜೀವಮಾಪನಕ್ಕೆ ಬದಲಾಗಿ ಉಪಯೋಗಿಸಬಹುದು.  ಕಲರಿ ಮೆಟ್ರಿ ವಿಶ್ಲೇಷಣೆಯಲ್ಲಿ 5% ಎಥನಾಲಿಕ್ ಸಲ್ಫ್ಯೂರಿಕ್ ಆಮ್ಲ ಅಥವಾ ಕ್ಲೊರೋಫಾರಮಿನಲ್ಲಿ 20% ಲೆಡ್ ಕ್ಲೋರೈಡ್ ಇರುವ ದ್ರಾವಣಗಳನ್ನು ಬಳಸುವರು. 

	ಜೈವಿಕ ಸಂಶ್ಲೇಷಣೆ: ಒಂದು ಜಿಬರೆಲಿನ್ ಅಣುವಿನಲ್ಲಿ (ಉಂ3ರಲ್ಲಿ) ಅಸಮಾಂಗ 8 ಕಾರ್ಬಾನ್ ಪರಮಾಣುಗಳಿರುವುದರಿಂದ 256 ಬಗೆಯ ಐಸೊಮರ್‍ಗಳು ಉತ್ಪತ್ತಿಯಾಗಬಹುದಾದ್ದರಿಂದ ಬೃಹತ್ ಪ್ರಮಾಣದ ಜಿಬರೆಲಿನ್ ಸಂಶ್ಲೇಷಣೆ ಸದ್ಯದಲ್ಲೇ ಸಾಧ್ಯವಾಗಲಾರದು. ಆದ್ದರಿಂದಲೇ ಸಸ್ಯ ಮತ್ತು ಶಿಲೀಂಧ್ರಗಳಿಂದ ಮಾತ್ರವೇ ಸದ್ಯಕ್ಕೆ ಜಿಬರೆಲಿನ್ನನ್ನು ಸಂಶ್ಲೇಷಿಸುತ್ತಾರೆ. ಜೈವಿಕವಾಗಿ ಜಿಬರೆಲಿನ್ ಸಂಶ್ಲೇಷಣೆಯಲ್ಲಿ ಅಸಿಟೇಟ್ ಪ್ರಮುಖವಾದ ಮೂಲವಸ್ತು ಎಂದು 1950ರಲ್ಲಿ ಬರ್ಚ್ ಮತ್ತು ಸಹಸಂಶೋಧಕರು ಕಂಡುಹಿಡಿದರು. ಜಿಬರೆಲಿನ್ ಸಂಶ್ಲೇಷಣೆಯ ಮುಖ್ಯ ಸೂತ್ರಗಳು ಸ್ಟೀರಾಯ್ಡ್ ಮತ್ತು ಕೊಲೆಸ್ಟಿರಾಲ್ ಜೈವಿಕ ಸಂಶ್ಲೇಷಣೆಯನ್ನು ಹೋಲುವುವು.  ಜಿಬರೆಲಿನ್ ಜೈವಿಕ-ಸಂಶ್ಲೇಷಣೆಯಲ್ಲಿ ಕಾರೀನ್ ಎಂಬುದು ಪ್ರಮುಖ ಮಧ್ಯವರ್ತಿ ಎಂದು ಗೊತ್ತಾಗಿದೆ. 

	ಜೈವಿಕ ಪರಿಣಾಮ: 1950 ದಶಕದಲ್ಲಿ ಜಿಬರೆಲಿನ್ನಿನ ಜೈವಿಕ ಪರಿಣಾಮಗಳ ಬಗ್ಗೆ ಬಹಳ ಸಂಶೋಧನೆ ನಡೆಯಿತು. ಇದರಲ್ಲಿ ಇಂಗ್ಲೆಂಡಿನ ಬ್ರೈನ್ ಮತ್ತು ಅವನ ಸಹಾಯಕ ಸಂಶೋಧಕರ ಅಧ್ಯಯನ ಬಹು ಮುಖ್ಯ. ಸಸ್ಯಗಳ ಮೇಲೆ ಜಿಬರೆಲಿನ್ನಿನ ಪ್ರಧಾನ ಜೈವಿಕ ಪರಿಣಾಮವೆಂದರೆ ಸಸ್ಯಗಳ ಕಾಂಡವನ್ನು ವಿಪರೀತ ಉದ್ದ ಮಾಡುವ ಶಕ್ತಿ. ಉದಾಹರಣೆಗೆ ಗಿಡ್ಡ ಸಂತತಿಯ ಬಟಾಣಿ, ಮೆಕ್ಕೆಜೋಳ, ಹುರುಳಿ. ಕಾಫಿಗಳ ಮೇಲೆ ಜಿಬರೆಲಿನ್ನನ್ನು ಪ್ರಯೋಗಿಸುವಾಗ ಈ ಸಸ್ಯಗಳು ತಮ್ಮ ಸಹಜಸ್ಥಿತಿಯನ್ನು ಬಿಟ್ಟು ಬೇರೆ ತಳಿಗಳನ್ನು ಹೋಲುವಷ್ಟು ಉದ್ದವಾಗುತ್ತವೆ.  ವೃತ್ತಾಕಾರದ ಸಸ್ಯಗಳ ಮೇಲೆ (ಇವುಗಳಲ್ಲಿ ಅಂತರ್‍ಗಿಣ್ಣು ಪ್ರದೇಶ ಬಹಳ ಸಂಕುಚಿತಗೊಂಡು, ಎಲೆಗಳೆಲ್ಲ ವೃತ್ತಾಕಾರವಾಗಿ ಹುಟ್ಟಿರುತ್ತವೆ ಮತ್ತು ಸಾಮಾನ್ಯವಾಗಿ ಮೊದಲ ವರ್ಷದಲ್ಲಿ ಕಾಂಡಭಾಗದ ಬೆಳೆವಣಿಗೆ ಬಹಳ ಕಡಿಮೆ ಇದ್ದು ಎರಡನೆಯ ವರ್ಷದಲ್ಲಿ ಚಳಿ ಅಥವಾ ನಿರ್ದಿಷ್ಟವಾದ ಪ್ರಕಾಶಾವಧಿಗೆ ಒಡ್ಡಿದ ಮೇಲೆಯೇ ಅವುಗಳ ಕಾಂಡ ಬೆಳೆಯುತ್ತದೆ.) ಜಿಬರೆಲಿನ್ನನ್ನು ಪ್ರಯೋಗಿಸಿದಾಗ ಅವುಗಳ ಕಾಂಡ-ಚಳಿ ಮತ್ತು ಪ್ರಕಾಶಾವಧಿಗೆ ಒಡ್ಡದಿದ್ದರೂ ಬಹು ಬೇಗ ಬೆಳೆಯುತ್ತದೆ.  ಸಸ್ಯಗಳಲ್ಲಿ ಕಂಡುಬರುವ ಬೆಳವಣಿಗೆಯ 3 ತಾಣಗಳ ಮೇಲೆ ಜಿಬರೆಲಿನ್ನಿನ ಪರಿಣಾಮಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.  ಅಗ್ರಸ್ಥವರ್ಧನ ಅಂಗಾಂಶಗಳು ಜಿಬರೆಲಿನ್‍ನಿಂದ ಸಂಪೂರ್ಣ ಸ್ವಾತಂತ್ರ್ಯ ಹೊಂದಿವೆಯಾದರೆ ತುದಿಯ ಕೆಳಗಿನ ವರ್ಧನ ಅಂಗಾಂಶಗಳು ಸಂಪೂರ್ಣವಾಗಿ ಜಿಬರೆಲಿನ್ ಅಂಶದ ಮೇಲೆ ಅವಲಂಬಿತವಾಗಿರುತ್ತವೆ ಮತ್ತು ಜೀವಕೋಶ ಲಂಬನ ವಲಯದ ಮೇಲೆ ಜಿಬರೆಲಿನ್ ಪ್ರಭಾವವೇ ಇಲ್ಲ. 

	ಸಸ್ಯಗಳಲ್ಲಿ ಜಿಬರೆಲಿನ್ ಬೀರುವ ಮತ್ತೊಂದು ಪ್ರಮುಖವಾದ ಪ್ರಭಾವವೆಂದರೆ ಹೂಬಿಡುವಿಕೆಯಲ್ಲಿ ಅದರ ಪಾತ್ರ. ಹೂಬಿಡಲು ಹ್ರಸ್ವ ಅವಧಿಯ ಬೆಳಕಿರುವ ವಾತಾವರಣ ಬೇಕಾದ ಸಸ್ಯಗಳಿಗೆ ಮತ್ತು ಹೂಬಿಡಲು ಚಳಿಗೆ ಒಡ್ಡುವುದು ಅವಶ್ಯವಾದ ಸಸ್ಯಗಳಿಗೆ ಜಿಬರೆಲಿನ್ ಪ್ರಯೋಗ ಮಾಡಿದರೆ ಎಲ್ಲ ದಿನಗಳಲ್ಲೂ ಎಲ್ಲ ಹವೆಯಲ್ಲೂ ಹೂಬಿಡುತ್ತವೆ.  ಆದರೆ ದೀರ್ಘ ಅವಧಿಯ ಬೆಳಕಿನ ಆವಶ್ಯಕತೆಯಿರುವ ಸಸ್ಯಗಳ ಮೇಲೆ ಜಿಬರೆಲಿನ್ ಯಾವ ಪರಿಣಾಮವನ್ನೂ ಬೀರುವುದಿಲ್ಲ.
 
	ಕೆಲವು ಸಸ್ಯಗಳಲ್ಲಿ, ಸಸ್ಯಭಾಗಗಳಲ್ಲಿ ಮತ್ತು ಬೀಜಗಳಲ್ಲಿ ಕಂಡುಬರುವ ಸುಪ್ತಾವಸ್ಥೆಯನ್ನು ತಡೆಯುವುದರಲ್ಲಿ ಜಿಬರೆಲಿನ್ ಬಹು ಪ್ರಮುಖವಾದುದು.  ಇವಲ್ಲದೆ ಜಿಬರೆಲಿನ್ನಿನಿಂದ ಪ್ರೇರಣೆ ಹೊಂದುವ ಸಸ್ಯ ಶಾರೀರಿಕ ಮತ್ತು ಭೌತ ಕ್ರಿಯೆಗಳು ಹಲವಾರು.  ಉದಾಹರಣೆಗೆ, ಎಲೆಗಳ ಅಳತೆ ಮತ್ತು ಆಕಾರ, ಕೇಂಬಿಯಮ್ ಪ್ರಚೋದನೆ, ಕಾಂಡ, ತೊಟ್ಟು ಮತ್ತು ಎಲೆಗಳ ಗುರುತ್ವಾಕರ್ಷಕ ಬೆಳವಣಿಗೆಯ ವಿರುದ್ಧತೆ, ಬೀಜರಹಿತ ಹಣ್ಣುಗಳ ಬೆಳವಣಿಗೆ, ಕಿಣ್ವಗಳ ಮೇಲಿನ ಹತೋಟಿ ಮುಂತಾದವು, ಬೀಜಗಳು ಮೊಳೆಯುವಾಗ ಉತ್ಪತ್ತಿಯಾಗುವ ಅಮೈಲೇಸ್ ಕಿಣ್ವ ಪ್ರಚೋದನೆ-ಇವುಗಳ ಮೇಲೆ ಜಿಬರೆಲಿನ್ ಪ್ರಭಾವ ಬೀರುತ್ತದೆ. 

	ಜಿಬರೆಲೆನ್ನಿನ ಉಪಯೋಗಗಳು: (-ಅಮೈಲೇಸ್ ಕಿಣ್ವವನ್ನು ಶರ್ಕರ ಬೀಜಗಳಲ್ಲಿ ಪ್ರಚೋದಿಸಿ ಅದರ ಅಂಶವನ್ನು ಹೆಚ್ಚಿಸುವ ಗುಣ ಜಿಬರೆಲಿನ್ನಿಗೆ ಇರುವುದರಿಂದ ಇದರ ಉಪಯೋಗ ಮಾಲ್ಟಿಂಗ್ ಕೈಗಾರಿಕೆಯಲ್ಲಿ ಬಹಳ ಹೆಚ್ಚು . ಕಾಂಡದ ಬೆಳವಣಿಗೆಯನ್ನು ಹೆಚ್ಚು ಮಾಡುವುದರಿಂದ ಜೆಬರೆಲಿನ್ನನ್ನು ಹುಲ್ಲಿನ ಬೆಳವಣಿಗೆ ಹೆಚ್ಚುವಂತೆ ಮಾಡಲು ಬಳಸುತ್ತಾರೆ. ಕಬ್ಬಿನ ಮೇಲೆ ಪ್ರಯೋಗಿಸುವುದರಿಂದ ಅದರ ಕಾಂಡದ ಅಂತರ್ಗಿಣ್ಣು ಸಂಖ್ಯೆ ಸಕ್ಕರೆ ಅಧಿಕ ಮೊತ್ತದಲ್ಲಿ ಶೇಖರವಾಗುತ್ತದೆ. ಅಲ್ಲದೆ ವಿವಿಧ ಹಣ್ಣುಗಳಲ್ಲಿ ಮತ್ತು ಅವುಗಳ ತೊಟ್ಟುಗಳ ಉದ್ದ ಹೆಚ್ಚಿಸಿ ಆ ಮೂಲಕ ಹಣ್ಣು ಕೊಳೆಯುವಿಕೆಯ ಪ್ರಮಾಣವನ್ನು ನಿಯಂತ್ರಿಸಲು ಜಿಬರೆಲಿನ್ನನ್ನು ಉಪಯೋಗಿಸುವರು. 
(ಎಸ್.ಆರ್.ಜಿ.)
ಪರಿಷ್ಕರಣೆ : ಹರೀಶ್ ಭಟ್
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ